ವಿಶ್ವ ಏಡ್ಸ್ ದಿನ
ಪ್ರತಿ ವರ್ಷ ಡಿಸೆಂಬರ್ ೧ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ.
ಏಡ್ಸ್ ಒಂದು ಬೀಕರವಾದ ಕಾಯಿಲೆಯಾಗಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ಕಾಯಿಲೆ ಉಂಟಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಏಡ್ಸ್ ಪೀಡೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ.
ವಿಶ್ವದೆಲ್ಲೆಡೆ ಕೆಂಪು ರೇಷ್ಮೆಪಟ್ಟಿಯ ಚಿನ್ನೆಯು ಏಡ್ಸ್ ಪೀಡೆಯ ವಿರುದ್ದ ನಡೆಯುತ್ತಿರುವ ಹೋರಾಟವನ್ನು ಬಿಂಬಿಸುತ್ತದೆ.
ಏಡ್ಸ್-ಮನುಕುಲದ ಮಹಾಮಾರಿ
ಮನುಕುಲದ ಮಹಾಮಾರಿ ಎಂದೇ ಕುಖ್ಯಾತ ವಾಗಿರುವ, ಅಸುರಕ್ಷಿತ ಲೈಂಗಿಕ ಸಂಪರ್ಕಗಳ ಮೂಲಕ ಜಗತ್ತಿನಾದ್ಯಂತ ಹರಡಿರುವ ಹೆಚ್.ಐ.ವಿ./ಏಡ್ಸ್ ರೋಗ ಇದುವರೆಗೂ ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡಿದ್ದು, ತನ್ನ ಕಬಂಧಬಾಹುವನ್ನು ವಿಶ್ವದೆಲ್ಲಡೆ ವಿಸ್ತರಿಸುತ್ತಾ ಸಾಗಿದೆ. ಆಧುನಿಕ ಜಗತ್ತಿನಲ್ಲಿ ಅನೇಕ ರೋಗಗಳಿಗೆ ಪರಿಹಾರ ವನ್ನು ಕಂಡು ಹಿಡಿದಿರುವ ನಮ್ಮ ವಿಜ್ಞಾನದ ಅನೇಕ ಆವಿಷ್ಕಾರಗಳು, ಪ್ರಯೋಗಗಳು ಈ ರೋಗದ ರೌದ್ರನರ್ತನದೆದುರು ನಿಲ್ಲಲು ಇದುವರೆಗೂ ಸಾಧ್ಯವಾಗುತ್ತಿಲ್ಲ.
ಈ ಎಚ್.ಐ.ವಿ. ಸೋಂಕಿನ ಕುರಿತು ಜಾಗೃತಿ ಮೂಡಿಸಲು ಡಿ.1ರಂದು ವಿಶ್ವಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ.
ಏಡ್ಸ್ ಮಹಾಮಾರಿ ವಿರುದ್ಧ ಅರಿವಿಗೆ ಆ ದಿನ ಬಹಳ ಮಹತ್ವಪೂರ್ಣ ವಾದದ್ದು.
1987ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ಏಡ್ಸ್ ದಿನ ಆಚರಿಸಲಾಗುತ್ತಿತ್ತು.
ಬಳಿಕ 1988 ರಲ್ಲಿ ಡಿ.1ರಂದು ಏಡ್ಸ್ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆಯಿತು. ವಿಶ್ವಸಂಸ್ಥೆಯೂ ಈ ದಿನ ವನ್ನು ಆಚರಿಸುವ ಬಗ್ಗೆ ಘೋಷಣೆ ಮಾಡಿದೆ.
ಈ ವರ್ಷ ‘ಹೊಸ ಹೆಚ್.ಐ.ವಿ./ಏಡ್ಸ್ ಸೋಂಕು, ಏಡ್ಸ್ ಸಂಬಂಧಿತ ಕಾಯಿಲೆಯಿಂದ ಸಾವು, ತಾರತಮ್ಯವನ್ನು ಸೊನ್ನೆಗೆ ತನ್ನಿ’ ((Getting to Zero: Zero new HIV infections. Zero deaths from AIDS-related illness. Zero discrimination))ಎಂಬ ಘೋಷಣೆಯೊಂದಿಗೆ ವಿಶ್ವ ಏಡ್ಸ್ ದಿನಾಚರಣೆ ಯನ್ನು ಆಚರಿಸಲಾಗುತ್ತ ಬರಲಾಗಿದೆ.
2012ರಲ್ಲಿ 35.3 ಮಿಲಿಯನ್ ಮಂದಿ ಹೆಚ್.ಐ.ವಿ.ಯೊಂದಿಗೆ ಬದುಕುತ್ತಿದ್ದು, ಅದರಲ್ಲಿ 2.1 ಮಿಲಿಯನ್ ಮಂದಿ 10ರಿಂದ 19 ವಯೋಮಾನದ ಯುವ ಜನತೆಯಿದ್ದಾರೆ. ಅಂದಾಜು 3.34 ಮಿಲಿಯನ್ ಮಕ್ಕಳು ಹೆಚ್.ಐ.ವಿ.ಯೊಂದಿಗೆ ಬದುಕುತ್ತಿದ್ದಾರೆ. ವಿಶ್ವದಲ್ಲಿ 2.3 ಮಿಲಿಯನ್ ಹೊಸದಾಗಿ ಹೆಚ್.ಐ.ವಿ. ಪೀಡಿತರಾಗಿದ್ದಾರೆ. ಇದುವರೆಗೂ ಅಂದಾಜು 36 ಮಿಲಿಯನ್ ಗು ಹೆಚ್ಚು ಮಂದಿ ಏಡ್ಸ್ ನಿಂದ ಮರಣ ಹೊಂದಿದ್ದಾರೆ.
ಅದರಲ್ಲಿ 1.6 ಮಿಲಿಯನ್ ಮಂದಿ 2012ರಲ್ಲಿ ಏಡ್ಸ್‌ನಿಂದ ಸಾವಿಗೀಡಾಗಿ ದ್ದಾರೆ. ಈ ಹೆಚ್.ಐ.ವಿ. ಸೋಂಕು ಮಾನವ ಕುಲಕ್ಕೆ ಬಂದೊದಗಿರುವ ವಿಪತ್ತು. ಮಾನವ ಶರೀರದ ರೋಗ ನಿರೋಧಕ ಶಕ್ತಿಯನ್ನು ಕುಂದಿಸಬಲ್ಲ ಈ ಸೋಂಕನ್ನು ಪೂರ್ಣಮಟ್ಟದಲ್ಲಿ ಗುಣ ಪಡಿಸುವ ಔಷಧಗಳೂ ಇಲ್ಲ. ಆದರೆ ಇದು ನೂರಕ್ಕೆ ನೂರರಷ್ಟು ಬರದಂತೆ ತಡೆಯಬಹು ದಾದ ವಿಶಿಷ್ಠ ಗುಣವಿರುವ ಸೋಂಕು. ಈ ಸೋಂಕು 4 ಮಾರ್ಗಗಳಲ್ಲಿ ಮಾತ್ರ ಹರಡುತ್ತದೆ.
ಅವುಗಳೆಂದರೆ
1.ಅಸುರಕ್ಷಿತ ಲೈಂಗಿಕತೆ.
2.ಸೋಂಕು ಇರುವ ವ್ಯಕ್ತಿಯ ರಕ್ತ ಪಡೆಯುವುದರಿಂದ
3.ಸೋಂಕು ಇರುವ ವ್ಯಕ್ತಿಯು ಉಪಯೋಗಿ ಸಿದ ಸಿರಿಂಜ್, ಸೂಜಿ ಮತ್ತು ಉಪಕರಣಗಳನ್ನು ಸಂಸ್ಕರಿಸದೆ ಬಳಸುವುದರಿಂದ
4.ಸೋಂಕಿರುವ ತಾಯಿಯಿಂದ ಜನಿಸುವ ಮಗುವಿಗೆ.
ಮೇಲಿನ ವಿಧಾನಗಳಿಂದ ಮಾನವ ಶರೀರ ವನ್ನು ಪ್ರವೇಶಿಸುವ ಈ ಹೆಚ್.ಐ.ವಿ. ವೈರಸ್ ಗಳು ದೇಹದ ರೋಗ ನಿರೋಧಕ ಶಕ್ತಿಯ ಜಾಲವನ್ನು ತುಂಡರಿಸಿ, ರೋಗಗಳ ವಿರುದ್ಧ ಹೋರಾಡುವ ಬಿಳಿರಕ್ತ ಕಣಗಳ ಶಕ್ತಿಯನ್ನು ದುರ್ಬಲಗೊಳಿಸಿ ಇಡೀ ದೇಹವನ್ನು ಆವರಿ ಸುತ್ತವೆ.
ಇದರಿಂದಾಗಿ ರೋಗಿಯು ನಿರಂತರ ಜ್ವರ, ಭೇದಿ, ಕೆಮ್ಮು ಇವುಗಳಿಂದ ದೇಹದ ತೂಕ ಕಡಿಮೆಯಾಗುತ್ತಾ, ಕೃಶನಾಗುತ್ತಾನೆ. ವ್ಯಕ್ತಿಗೆ ಹೆಚ್.ಐ.ವಿ. ಸೋಂಕು ಉಂಟಾದಾಗ ಆ ವ್ಯಕ್ತಿಗೆ ಏಡ್ಸ್ ರೋಗ ಬೆಳವಣಿಗೆಯ ಹಂತ ತಲುಪು ವವರೆಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ.
ರೋಗ ಲಕ್ಷಣಗಳು ಕಂಡು ಬರಲು 6 ತಿಂಗಳಿ ನಿಂದ 10 ವರ್ಷ ಅಥವಾ ಅದಕ್ಕೂ ಹೆಚ್ಚಿನ ಸಮಯ ತೆಗದು ಕೊಳ್ಳಬಹುದು.
ಅಲ್ಲಿಯ ತನಕ ಆ ವ್ಯಕ್ತಿ ಸಾಮಾನ್ಯವಾಗಿ ಮತ್ತು ಆರೋಗ್ಯವಂತನಾಗಿ ಕಾಣುತ್ತಾನೆ. ಹಸ್ತಲಾಘವ ಮಾಡಿದಾಗ, ಜೊತೆಯಲ್ಲಿ ಆಟವಾಡಿದಾಗ, ಆಹಾರದಿಂದಾಗಲಿ, ತಟ್ಟೆ, ಬಟ್ಟಲುಗಳಿಂದಾಗಲಿ, ಕೀಟಗಳಿಂದಾಗಲಿ, ಈಜುಕೊಳದಿಂದಾಗಲಿ ಹಾಗೂ ಏಡ್ಸ್‌ಗೆ ಒಳಗಾದವರಿಗೆ ಆರೈಕೆ ಮತ್ತು ಚಿಕಿತ್ಸೆ ನೀಡಿ ದಾಗ ಹೆಚ್.ಐ.ವಿ. ಹರಡುವುದಿಲ್ಲ.
ಹಲವು ಸಂಶೋಧನೆಗಳ ಬಳಿಕ ಈ ರೋಗ ನಿಯಂತ್ರಣಕ್ಕೆ ಸಿಕ್ಕಿರುವುದು ಅಲ್ಪಯಶಸ್ಸು ಮಾತ್ರ.
ರೋಗ ಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲಿ ಹೆಚ್.ಐ.ವಿ. ವೈರಸ್ ದೇಹದ ಇತರ ಭಾಗಗಳಿಗೆ ಕ್ಷಿಪ್ರಗತಿಯಲ್ಲಿ ಹರಡದಂತೆ ತಡೆಗಟ್ಟಲು ಕೆಲವು ಔಷಧಿಗಳನ್ನು ಕಂಡು ಹಿಡಿದಿದ್ದು, ಇದರಿಂದ ರೋಗಿಯ ಸಾವನ್ನು ಸ್ವಲ್ಪದಿನಗಳವರೆಗೆ ಮುಂದೂಡಲು ಸಾಧ್ಯ ವಾಗಿದೆ.
ಆದ್ದರಿಂದ ಸದ್ಯದಲ್ಲಿ ಈ ರೋಗ ಬರದಂತೆ ಮುಂಜಾಗ್ರತೆ ವಹಿಸುವುದೇ ಸದ್ಯ ಈ ರೋಗದಿಂದ ಪಾರಾಗಲು ಇರುವ ವಿಧಾನ.
ಕೆಳಕಂಡ ಮಾರ್ಗಗಳನ್ನು ಅನುಸರಿಸಿ ಸೋಂಕನ್ನು ಹರಡದಂತೆ ತಡೆಯಬಹುದಾಗಿದೆ.
1.ಏಕೈಕ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ.
2.ಸುರಕ್ಷಿತ ಲೈಂಗಿಕತೆಗೆ ನಿರೋಧ್ ಬಳಸುವುದು.
3.ಸೂಜಿ, ಸಿರಿಂಜ್ ಮತ್ತು ಇತರೆ ಉಪಕರಣಗಳನ್ನು ಸಂಸ್ಕರಿಸಿ ಉಪಯೋಗಿ ಸುವುದು.
4.ಗರ್ಭಿಣಿಯರ ಹೆಚ್.ಐ.ವಿ. ಪರೀಕ್ಷೆಯನ್ನು ಸ್ವಯಂ ಪ್ರೇರಿತವಾಗಿ ಐ.ಸಿ.ಟಿ.ಸಿ.ಯಲ್ಲಿ ಮಾಡಿಸಿಕೊಂಡು, ಸೋಂಕಿದ್ದಲ್ಲಿ ಪ್ರತಿಬಂಧಕ ಕ್ರಮಗಳನ್ನು ಅನುಸರಿಸುವುದು.
ಭಾರತ ಸರಕಾರವು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಮೂಲಕ ದೇಶದಲ್ಲಿ ಹೆಚ್.ಐ.ವಿ./ಏಡ್ಸ್ ನಿಯಂತ್ರಣಕ್ಕೆ ಕ್ರಮಕೈಗೊಂಡಿದ್ದು, ಜನರಲ್ಲಿ ಕಾಂಡೋಮ್ ಬಳಕೆಯ ಕುರಿತು ಹಾಗೂ ಸುಲಭವಾಗಿ ದೊರಕುವಂತೆ ಮಾಡಲು ದೇಶದ ಹಲವು ಪೆಟ್ರೋಲ್ ಬಂಕ್, ವೈನ್ ಶಾಪ್ ಮುಂತಾದ ನಿರ್ದಿಷ್ಟ ಸ್ಥಳಗಳಲ್ಲಿ ಕಾಂಡೋಮ್ ವೆಂಡಿಂಗ್ ಮೆಷಿನ್ ಗಳನ್ನು ಸ್ಥಾಪಿಸಿ, ಅವುಗಳಲ್ಲಿ 2012ರ ಅಂತ್ಯದ ವೇಳೆಗೆ 228 ಮಿಲಿಯನ್ ಕಾಂಡೋಮ್‌ಗಳನ್ನು ಸರಬರಾಜು ಮಾಡಿದೆ.
2007ರಲ್ಲಿ ವಿಶ್ವಏಡ್ಸ್ ದಿನಾಚರಣೆ ಪ್ರಯುಕ್ತ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ 2008ವರೆಗೆ ಈ ರೈಲು ದೇಶದ ಪ್ರಮುಖ 180 ರೈಲು ನಿಲ್ದಾಣಗಳಲ್ಲಿ ಸುಮಾರು 6.2 ಮಿಲಿಯನ್ ಜನರಿಗೆ ಜಾಗೃತಿ ಮೂಡಿಸಿದ್ದು, 2009ರಲ್ಲಿ ಎರಡನೆ ಬಾರಿ ಮತ್ತು 2012ರಲ್ಲಿ 3ನೆ ಬಾರಿಗೆ ಈ ರೈಲು ದೇಶಾದ್ಯಂತ ಸಂಚರಿಸಿ, ಒಟ್ಟು 1 .14 ಕೋಟಿ ಜನರಿಗೆ ಹೆಚ್.ಐ.ವಿ./ಏಡ್ಸ್ ಕುರಿತು ಜಾಗೃತಿ ಮೂಡಿಸಿದೆ ಅಲ್ಲದೇ 1 ಲಕ್ಷ ಜನರಿಗೆ ಹೆಚ್.ಐ.ವಿ./ಏಡ್ಸ್ ತಡೆಗಟ್ಟುವ ಕುರಿತು ತರಬೇತಿ ನೀಡಿದ್ದು, ಪ್ರಸ್ತುತ ಈ ರೈಲಿನಲ್ಲಿ ಹೆಚ್.ಐ.ವಿ./ಏಡ್ಸ್ ಕುರಿತು ಸೋಂಕಿತರಿಗೆ ಆಪ್ತ ಸಲಹೆ, ತರಬೇತಿ ಮತ್ತು ಹೆಚ್.ಐ.ವಿ. ಪರೀಕ್ಷೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಕರ್ನಾಟಕದಲ್ಲಿ 2004 ರಲ್ಲಿ ಶೇ.1.5ರಷ್ಟಿದ್ದ ಹೆಚ್.ಐ.ವಿ./ಏಡ್ಸ್ ಸೋಂಕಿತರ ಪ್ರಮಾಣ 2011ರ ವೇಳೆಗೆ ಶೇ.0.69ರಷ್ಟು ಇಳಿಕೆ ಯಾಗಿತ್ತು.
ಅದನ್ನು ಶೂನ್ಯ ಪ್ರಮಾಣಕ್ಕೆ ತರಲು ಶ್ರಮಿಸಲಾಗುತ್ತಿದ್ದು, ರಾಜ್ಯದಲ್ಲಿ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಹೆಚ್.ಐ.ವಿ/ಏಡ್ಸ್ ಪತ್ತೆಗೆ ವ್ಯವಸ್ಥೆ ಕಲ್ಪಿಸ ಲಾಗಿದೆ. ತಾಯಿಯಿಂದ ಮಗುವಿಗೆ ಸೋಂಕು ಹರಡುವುದನ್ನು ತಪ್ಪಿಸಲು ಗರ್ಭೀಣಿಯರಿಗೆ ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ. ಹಾಗೂ ಹೆಚ್.ಐ.ವಿ./ಏಡ್ಸ್ ಪೀಡಿತರಿಗೆ ಎ.ಆರ್.ಟಿ. ಕೇಂದ್ರಗಳಲ್ಲಿ ಚಿಕಿತ್ಸೆ ಮತ್ತು ಔಷಧ ಪಡೆಯಲು ಹೋಗಿ ಬರುವ ಪ್ರಯಾಣ ಭತ್ತೆ ನೀಡಲೂ ಸಹ ಕ್ರಮ ಕೈಗೊಳ್ಳಲಾಗಿದೆ ಹಾಗೂ ಉಚಿತ ಔಷಧಿ ನೀಡಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನಲ್ಲಿ ಹೆಚ್.ಐ.ವಿ./ಏಡ್ಸ್ ಸೋಂಕಿನ ಕುರಿತು ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಹಾಗೂ ಇದನ್ನು ತಡೆಗಟ್ಟಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಡಿಸೆಂಬರ್ 1ರಂದು ನಡೆಯುವ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಪಾಲ್ಗೊಂಡು ಪ್ರಸ್ತುತ ಈ ರೋಗವನ್ನು ತಡೆಗಟ್ಟಲು ಅನುಸರಿಸ ಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಗಳಲ್ಲಿ ಭಾಗಿಯಾಗಿ, ಹೊಸ ಹೆಚ್.ಐ.ವಿ./ಏಡ್ಸ್ ಸೋಂಕು, ಏಡ್ಸ್ ಸಂಬಂಧಿತ ಕಾಯಿಲೆಯಿಂದ ಸಾವು, ತಾರತಮ್ಯ ವನ್ನು ಸೊನ್ನೆಗೆ ತರುವ ಸಾಮೂಹಿಕ ಪ್ರಯತ್ನ ದಲ್ಲಿ ಕೈ ಜೋಡಿಸೋಣ.
ಮತ್ತೋಮ್ಮೆ ಇದರ ಮಾಹಿತಿ ಎಲ್ಲರಿಗೂ ತಿಳಿಸಿ.
ಹೇಗೆ ಹರಡುತ್ತದೆ ?
1. ಎಚ್.ಐ.ವಿ ಸೋಂಕಿತ ರೋಗಿಯೊಂದಿಗಿನ ಅಸುರಕ್ಷಿತ ಲೈಂಗಿಕ ಸಂಪರ್ಕ
2. ಎಚ್.ಐ.ವಿ ಸೋಂಕಿತ ವ್ಯಕ್ತಿಗಳಿಂದ ರಕ್ತ ಪಡೆಯುವುದರಿಂದ
3. ಮಾಧಕ ದ್ರವ್ಯ ವ್ಯಸನಿಗಳು ಬಳಸಿದ ಎಚ್.ಐ.ವಿ ಸೋಂಕಿತ ಸೂಜಿ ಅಥವಾ ಸಿರಿಂಜಿಗಳನ್ನು ಬಳಸುವುದರಿಂದ
4. ಎಚ್.ಐ.ವಿ ಸೋಂಕಿತ ತಾಯಿಯಂದಿರಿಂದ ಮಗುವಿಗೆ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆಯ ಸಮಯದಲ್ಲಿ ಮತ್ತು ಎದೆ ಹಾಲೂಣಿಸುವ ಮುಖಾಂತರ
5. ಅಸ್ವಾಭಾವಿಕ ಲೈಂಗಿಕ ಕ್ರಿಯೆಗಳಾದ ಬಾಯಿ ಸೆಕ್ಸ್, ಗುಧದ್ವಾರದ ಸೆಕ್ಸ್
6. ದೇಹದ ಮೇಲೆ ಹಾಕುವ ಹಚ್ಚೆಗಳು ಮತ್ತು ದೇಹದ ವಿವಿಧ ಭಾಗಗಳಲ್ಲಿ ಹಾಕಿಕೊಳ್ಳುವ ಅಲಂಕಾರಿಕ ಸಾಮಾಗ್ರಿಗಳು ಒಂದು ವೇಳೆ ಎಚ್.ಐ.ವಿ ಸೋಂಕಿತವಾಗಿದ್ದಲ್ಲಿ ರೋಗ ಹರಡುವ ಸಾಧ್ಯತೆ ಇರುತ್ತದೆ.
ಹೇಗೆ ಹರಡುವುದಿಲ್ಲ
1. ಕೈ ಕುಲುಕುವುದು, ಆಲಿಂಗನ, ಸೀನುವುದು, ಕೆಮ್ಮುವುದು ಇತ್ಯಾದಿ
2. ಬೆವರು, ಎಂಜಲು, ಕಣ್ಣೀರು, ಸಿಂಬಳ, ಮಲ-ಮೂತ್ರ ಮುಂತಾದವುಗಳನ್ನು ಸ್ಪರ್ಶಿಸುವುದರಿಂದ
3. ಊಟ, ತಟ್ಟೆ, ಬಟ್ಟೆ, ನೀರು ಮುಂತಾದವುಗಳನ್ನು ಹಂಚಿಕೊಳ್ಳುವುದರಿಂದ
4. ಸೊಳ್ಳೆಗಳಿಂದ ಹರಡುವುದಿಲ್ಲ.
ಎಚ್.ಐ.ವಿ ವೈರಸ್ ಬಹಳ ಕಾಲ ಮನುಷ್ಯನ ದೇಹದ ಹೊರಗೆ ಜೀವಿಸಲಾರದು. ಹೊರಗಿನ ಉಷ್ಣತೆಯನ್ನು ಸಹಿಸಿಕೊಳ್ಳುವ ಶಕ್ತಿ ಅದಕ್ಕಿಲ್ಲ. ದೇಹದ ದ್ರವ ಆರಿದಾಗ ವೈರಾಣು ತನ್ನಿಂತಾನೇ ಸಾಯುತ್ತದೆ.
ಚಿಕಿತ್ಸೆ ಹೇಗೆ ?
ಏಡ್ಸ್ ರೋಗಕ್ಕೆ ಮದ್ದು ಇಲ್ಲ. ಚಿಕಿತ್ಸೆಯಿಂದ ರೋಗವನ್ನು ಗುಣ ಪಡಿಸಲು ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ART ಎಂಬ ಆಂಟಿ ರಿಟ್ರೊವೈರಲ್ ಥೆರಪಿ ಎಂಬ ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಯ ಮುಖಾಂತರ ಎಚ್.ಐ.ವಿ ರೋಗಾಣುವಿನ ಆರ್ಭಟವನ್ನು ಕಡಿಮೆ ಮಾಡಬಹುದು. ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಕುಂದದಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಇತರ ವ್ಯಕ್ತಿಗಳಂತೆ ಎಚ್.ಐ.ವಿ ಸೋಂಕಿತ ವ್ಯಕ್ತಿಗಳು ದೈನಂದಿನ ಜೀವನ ನಡೆಸಬಹುದು.
ತಪ್ಪು ಕಲ್ಪನೆಗಳು
ಏಡ್ಸ್ ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕೆಡಿಸುತ್ತದೆ. ನೆನಪಿರಲಿ, ಎಚ್.ಐ.ವಿ ಪೀಡಿತರು ಎಲ್ಲರಂತೆ ಜೀವನ ನಡೆಸಬಹುದು. ಎಚ್.ಐ.ವಿ ಸೋಂಕಿತರು ತಾನು ಎಚ್.ಐ.ವಿ ಸೋಂಕಿತ ಎಂದು ತಿಳಿದಾಕ್ಷಣ, ಆಕಾಶವೇ ತಲೆಯ ಮೇಲೆ ಬಿದ್ದಂತೆ ವರ್ತಿಸುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ತಾನು ಸಾಯುತ್ತೇನೆ ಎಂಬ ಭಯದಲ್ಲಿ ಊಟ, ನಿದ್ರೆ ಬಿಟ್ಟು ಚಿಂತೆಗೆ ಶರಣಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಈ ಚಿಂತೆಯಿಂದಲೇ ಇನ್ನೂ ಹತ್ತಿಪ್ಪತ್ತು ವರ್ಷ ಬಾಳಿ ಬದುಕಬೇಕಾದ ಜೀವ, ಒಂದೆರಡು ವರ್ಷದಲ್ಲಿಯೇ ಕೊರಗಿ ಕೊರಗಿ ಜೀವ ಬತ್ತಿ ಹೋಗುತ್ತದೆ. ಮಾನಸಿಕ ಚಿಂತೆ, ಒತ್ತಡ, ಅವಮಾನ, ಆತಂಕ, ಗಾಬರಿ ಮತ್ತು ಸಮಾಜದ ಪ್ರಶ್ನೆಗಳಿಗೆ ಹೆದರಿ ತನ್ನದಲ್ಲದ ತಪ್ಪಿಗೆ ಜೀವ ತೆರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಎಚ್.ಐ.ವಿ ಭಾದಿತರನ್ನು ಸಮಾಧಾನ ಮಾಡಿ ಸಾಂತ್ವನ ಹೇಳಿ ಅವರನ್ನು ಇತರರಂತೆ ಉಪಚರಿಸಿ, ಸಮಾಜದ ಮುಖ್ಯ ವಾಹಿನಿಗೆ ಸೇರಿಸಿಕೊಳ್ಳಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಪ್ರತಿ ವ್ಯಕ್ತಿಗೂ ಸಮಾಜದಲ್ಲಿ ಸ್ವತಂತ್ರವಾಗಿ ಜೀವಿಸುವ ಹಕ್ಕು ಇದೆ. ಅವರ ಜೀವನ ಹಕ್ಕನ್ನು ಕಸಿಯುವ ಕೆಲಸ ಯಾರೂ ಮಾಡದೇ ಅಂತವರಿಗೆ ಮಾನಸಿಕ ಸ್ಥೈರ್ಯ, ಧೈರ್ಯ ಮತ್ತು ಸಾಂತ್ವನ ಹೇಳಬೇಕಾದ ಅನಿವಾರ್ಯತೆ ಮತ್ತು ತುರ್ತು ಅವಶ್ಯಕತೆ ಇದೆ.
ಎಚ್.ಐ.ವಿ ಸೋಂಕು ತಗಲಿದ ತಕ್ಷಣ ’ಜೀವನ’ದ ಸರ್ವಸ್ವವನ್ನೂ ಕಳೆದುಕೊಂಡಂತೆ ವರ್ತಿಸಬಾರದು. ನಿರಂತರವಾದ ಔಷಧಿ ಮತ್ತು ಸಾಕಷ್ಟು ಮುಂಜಾಗರೂಕತೆ ವಹಿಸಿ, ದೇಹದ ಆರೋಗ್ಯ ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು. ಸಾಕಷ್ಟು ಷೌಷ್ಟಿಕವಾದ ಆಹಾರ ಸೇವಿಸಬೇಕು. ಮನೋಬಲವನ್ನು ಹೆಚ್ಚಿಸುವ, ದೇಹದ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವ ಪ್ರಕ್ರಿಯೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಇದರ ಜೊತೆಗೆ ಕಾಲಕಾಲಕ್ಕೆ ವೈದ್ಯರನ್ನು ಬೇಟಿಯಾಗಿ, ಆಪ್ತ ಸಮಾಲೋಜನೆ ನಡೆಸಿ ಮನಸ್ಸಿನ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು. ಅದೇ ರೀತಿ ಸಮಾಜದ ಇತರರೂ ಎಚ್.ಐ.ವಿ ಸೋಂಕಿತರನ್ನು ಮಾನವೀಯ ಕಳಕಳಿಯಿಂದ ನೋಡಬೇಕು. ಸಮಾಜ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಹಾಗಾದಲ್ಲಿ ಮಾತ್ರ ವಿಶ್ವ ಏಡ್ಸ್ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬರಬಹುದು ಮತ್ತು ಅರ್ಥಪೂರ್ಣವಾಗಬಹುದು.
ನಿಮ್ಮ ಮಾಹಿತಿಗಾಗಿ ನಿಮ್ಮವ,
ದಯಾನಂದ.ಎಮ್.ಡೋಣಗಾಪುರೆ
Dayanand.m.ddonagapure
At post: Gorta (B) (karnataka)
Phone no:8197695141
ಶೇರ್ ಮಾಡಿ ಎಲ್ಲರಿಗೂ, ಲೈಕ್ ಮಾಡುತ್ತ ಕಾಮೆಂಟ್ ಮಾಡಿ ನಿಮ್ಮ ಸ್ನೇಹಿತರಿಗೊ ಶೇರ್ ಮಾಡಲು ತಿಳಿಸಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ