1565 ರಲ್ಲಿ ತಾಳಿಕೋಟೆ ಯುದ್ಧದಲ್ಲಿ ದಖ್ಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು. ಬಹಮನಿ ಸುಲ್ತಾನರ ಪತನಾನಂತರ ಬಿಜಾಪುರದ ಸುಲ್ತಾನರು ಪ್ರವರ್ಧಮಾನಕ್ಕೆ ಬಂದು, ದಖ್ಖನ್ ಪ್ರದೇಶವನ್ನು ಆಳುತ್ತಿದ್ದರು. 17ನೇ ಶತಮಾನದ ಕೊನೆಯಲ್ಲಿ ಬಿಜಾಪುರದ ಸುಲ್ತಾನರು ಮೊಘಲರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ಬಿಜಾಪುರದ ಸುಲ್ತಾನರು ಉರ್ದು ಹಾಗು ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರ್ಸನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು. ತದನಂತರದ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗು ಅನ್ಯ ರಾಜರು ಆಳುತ್ತಿದ್ದರು. ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಮೈಸೂರಿನ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು. ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ “ರಾಜಪ್ರಮುಖ”ರಾದರು. 1975 ರವರೆಗೆ ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ಸಂದಾಯವಾಗುತ್ತಿತ್ತು ಹಾಗೂ ಇಂದಿಗೂ ಈ ಮನೆತನದ ಸದಸ್ಯರು ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ 1, 1956 ರಂದು ರಾಜ್ಯ ಪುನರ್ವಿಂಗಡನೆ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲಿನ ಮದರಾಸು, ಹೈದರಾಬಾದ್, ಮತ್ತು ಮುಂಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ “ವಿಶಾಲ ಮೈಸೂರು” ರಾಜ್ಯ ಅಸ್ತಿತ್ವಕ್ಕೆ ಬಂದಿತು . ನವೆಂಬರ್ 1, 1973 ರಲ್ಲಿ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.
Posted by:
Dayanand.m.donagapure
Gorta(B)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ